ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಗುರುವಾರ ಜೈಶೆ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಭಯೋತ್ಪಾದಕರು ನಡೆಸಿದ ಆತ್ಮಹತ್ಯಾ ದಾಳಿಯಲ್ಲಿ 44 ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ.
ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಭೀಕರ ಉಗ್ರದಾಳಿ ಇದಾಗಿದ್ದು, ಸ್ಫೋಟಕ ತುಂಬಿದ ವಾಹನವನ್ನು ಯೋಧರು ಪ್ರಯಾಣಿಸುತ್ತಿದ್ದ ಬಸ್ಗೆ ಡಿಕ್ಕಿ ಹೊಡೆಸಿ ದಾಳಿ ಮಾಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2,500ಕ್ಕೂ ಹೆಚ್ಚು ಕೇಂದ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ರಜೆ ಮುಗಿಸಿ ಕರ್ತವ್ಯಕ್ಕೆ ಪುನಃ ಕಣಿವೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ. 78 ವಾಹನಗಳಿಗೆ ಬೆಂಗಾವಲಾಗಿದ್ದ CRPF ಯೋಧರ ಬಸ್ಸುಗಳು ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ಆವಂತಿಪುರದ ಲಾಟೂಮೋಡೆ ಎಂಬಲ್ಲಿಗೆ ತಲುಪಿದಾಗ ಉಗ್ರರು ದಾಳಿ ನಡೆಸಿದರು.

ಬೆಳಗ್ಗೆ 3.30ಕ್ಕೆ ಜಮ್ಮುವಿನಿಂದ ಶ್ರೀನಗರಕ್ಕೆ 78 ಸಿಆರ್ಪಿಎಫ್ ವಾಹನಗಳಲ್ಲಿ 2,547 ಯೋಧರು ಪ್ರಯಾಣಿಸುತ್ತಿದ್ದರು. ಶ್ರೀನಗರಕ್ಕೆ 20 ಕಿ.ಮೀ ದೂರದಲ್ಲಿದ್ದಾಗ 350 ಕೆಜಿ ಸುಧಾರಿತ ಸ್ಫೋಟಕಗಳನ್ನು ತುಂಬಿದ್ದ ಬಿಳಿ ಬಣ್ಣದ ಸ್ಕಾರ್ಪಿಯೋ ಕಾರನ್ನು ಉಗ್ರನೊಬ್ಬ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಫೋಟಕಗಳು ಸ್ಫೋಟಗೊಂಡ ಪರಿಣಾಮ 44 ಮಂದಿ ಸೈನಿಕರು ವೀರ ಮರಣವನ್ನು ಅಪ್ಪಿದ್ದಾರೆ.
ಉಳಿದ ಯೋಧರು ಎಚ್ಚೆತ್ತುಕೊಳ್ಳುವ ಮುನ್ನವೇ ಉಗ್ರರು, ವೀರ ಯೋಧರ ಮೇಲೆ ಗುಂಡಿನ ಮಳೆಗರೆದಿದ್ದಾರೆ.

ಸ್ಥಳದಲ್ಲೇ ಕೆಲ ವೀರ ಯೋಧರು ಸ್ವರ್ಗ ಸೇರಿದರೆ, ಮತ್ತೆ ಕೆಲವರು ಆಸ್ಪತ್ರೆಯಲ್ಲಿ ದೇಶಕ್ಕಾಗಿ ಉಸಿರು ಚೆಲ್ಲಿದರು.
ಸ್ಫೋಟಕ ತುಂಬಿದ ಉಗ್ರರ ವಾಹನವನ್ನು ಕಾಕಪೋರಾದ ಆದಿಲ್ ಅಹ್ಮದ್ ಎಂಬ ಉಗ್ರ ಚಲಾಯಿಸುತ್ತಿದ್ದ. ಈತ 2018ರಲ್ಲಿ ಜೆಇಎಂ ಉಗ್ರ ಸಂಘಟನೆ ಸೇರಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಜಮ್ಮು ಕಾಶ್ಮೀರದ ಉರಿ ಸೇನಾ ನೆಲೆಯ ಮೇಲೆ 2016ರ ಸೆಪ್ಟೆಂಬರ್ 18ರಂದು ನಾಲ್ವರು ಉಗ್ರರು ದಾಳಿ ನಡೆಸಿ 18 ಮಂದಿ ಯೋಧರನ್ನು ಹತ್ಯೆ ಮಾಡಿದ್ದರು. ಭಾರತೀಯ ಸೇನೆ ಸಮವಸ್ತ್ರ ಧರಿಸಿ ಅಕ್ರಮವಾಗಿ ಒಳ ನುಗ್ಗಿದ್ದ ಈ ಪಾಪಿಗಳು ಯೋಧರು ಮಲಗಿದ್ದಾಗ ದಾಳಿ ನಡೆಸಿ ಕೃತ್ಯ ಎಸಗಿದ್ದರು. ಇಲ್ಲಿಯವರೆಗೆ ದೇಶದ ಇತಿಹಾಸದಲ್ಲಿ ಅತಿ ದೊಡ್ಡ ದಾಳಿ ಎಂಬ ಕುಖ್ಯಾತಿ ಗಳಿಸಿತ್ತು. ಈಗ ಇದಕ್ಕಿಂತಲೂ ಅತಿ ದೊಡ್ಡ ದಾಳಿ ನಡೆದಿದ್ದು ಉಗ್ರರ ಪಾಪಿ ಕೃತ್ಯಕ್ಕೆ ಅಮಾಯಕ 44 ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ.

ಸ್ಫೋಟದ ತೀವ್ರತೆಯಿಂದ ಹಲವು ಗಂಭೀರ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಏರುವ ಸಾಧ್ಯತೆಯಿದೆ.
Discussion about this post