ಬೆಂಗಳೂರು : ಈ ಹಿಂದೆ ಮೊದಲ ಹಂತದ ಲಸಿಕೆ ವಿತರಣಾ ಕಾರ್ಯ ಪ್ರಾರಂಭವಾದ ಸಂದರ್ಭದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಜನಪ್ರತಿನಿಧಿಗಳು ಲಸಿಕೆ ಪಡೆಯಲು ತಮ್ಮ ಅಧಿಕಾರ ಬಳಸಬಾರದು. ತಮ್ಮ ಸರದಿ ಬಂದಾಗಲೇ ಅವರು ಲಸಿಕೆ ಪಡೆದುಕೊಳ್ಳಬೇಕು.
ದೇಶದ ನಾಗರಿಕರಿಗೆ ಲಸಿಕೆಯನ್ನು ತಲುಪಿಸುವುದು ನಮ್ಮ ಮೊದಲ ಆದ್ಯತೆಯಾಗಿದ್ದು, ಇದಕ್ಕೆ ಎಲ್ಲರೂ ಸಹಕರಿಸಬೇಕು ಅಂದಿದ್ದರು. ಹೀಗಾಗಿ ಮೊದಲ ಹಂತದಲ್ಲೇ ಕೊರೋನಾ ಲಸಿಕೆ ಪಡೆಯುವ ನಿರೀಕ್ಷೆಯಲ್ಲಿದ್ದ ಶಾಸಕರು, ಸಂಸದರು ನಿರಾಶೆಗೊಂಡಿದ್ದರು.
ಹಾಗಂತ ಸುಮ್ಮನಿರಲಿಲ್ಲ, ನಾವು ಕೂಡಾ ಕೊರೋನಾ ವಾರಿಯರ್ಸ್ ಗಳು ಹೀಗಾಗಿ ನಮ್ಮನ್ನೂ ಕೊರೋನಾ ಯೋಧರು ಎಂದು ಪರಿಗಣಿಸಿ ಎಂದು ಕೆಲವರು ಆಗ್ರಹಿಸಿದ್ದರು.
ಇದೀಗ ಲಭ್ಯ ಮಾಹಿತಿಗಳ ಪ್ರಕಾರ ಎರಡನೇ ಹಂತದಲ್ಲಿ ಪ್ರಧಾನಿ ಹಾಗೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಲಸಿಕೆ ಪಡೆಯಲಿದ್ದಾರೆ ಎನ್ನಲಾಗಿದೆ.
ಮಾತ್ರವಲ್ಲದೆ 50 ವರ್ಷ ಮೀರಿದ ಶಾಸಕರು ಮತ್ತು ಸಂಸದರೂ ಕೂಡಾ ಎರಡನೇ ಹಂತದಲ್ಲಿ ಲಸಿಕೆ ಪಡೆಯಲಿದ್ದಾರಂತೆ.
ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ. ಆದರೆ ಭಾರತದ ಲಸಿಕೆಗಳ ಬಗ್ಗೆ ಯೋಜಿತ ಅಪಪ್ರಚಾರ ನಡೆಯುತ್ತಿರುವ ಕಾರಣ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಬಗ್ಗೆ ಆತಂಕವಿದೆ.
ಈ ಆತಂಕ ದೂರ ಮಾಡುವ ನಿಟ್ಟಿನಲ್ಲಿ ಸೆಲೆಬ್ರೆಟಿಗಳು, ಜನ ಪ್ರತಿನಿಧಿಗಳಿಗೆ ಮುಂದಿನ ಹಂತದಲ್ಲಿ ಲಸಿಕೆ ಕೊಡುವ ಸಾಧ್ಯತೆಗಳಿದೆ.
ಈ ಮೂಲಕ ಜನತೆಯಲ್ಲಿ ಲಸಿಕೆ ಬಗ್ಗೆ ವಿಶ್ವಾಸ ಮೂಡಿಸುವ ಕೆಲಸ ಮಾಡಲಾಗುತ್ತಿದೆ.
ನಮ್ಮ ಶಾಸಕರೇ ಲಸಿಕೆ ಪಡೆದಿದ್ದಾರೆ, ನಮ್ಮ ಸಂಸದರೇ ಲಸಿಕೆ ಪಡೆದಿದ್ದಾರೆ ಅನ್ನುವ ವಿಶ್ವಾಸವನ್ನು ಈ ಮೂಲಕ ಜನತೆಯಲ್ಲಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.
Discussion about this post