ಜೈಪುರ : ಕೊರೋನಾ ಸೋಂಕಿನ ಎರಡನೆ ಅಲೆಯ ವಿರುದ್ಧ ಹೋರಾಟ ಪ್ರಾರಂಭವಾಗಿರುವ ನಡುವೆಯೇ, ಸೋಂಕು ಸೋಲಿಸುವ ನಿಟ್ಟಿನಲ್ಲಿ ಲಸಿಕಾ ಯಜ್ಞವೂ ನಡೆಯುತ್ತಿದೆ. ಈ ನಡುವೆ ಕೊರೋನಾ ಲಸಿಕೆಯ ಕೊರತೆ ಎದುರಾಗಿದ್ದು, ಹಲವು ಕಡೆಗಳಲ್ಲಿ ಲಸಿಕಾ ಕೇಂದ್ರಗಳನ್ನು ಮುಚ್ಚಬೇಕಾದ ಪರಿಸ್ಥಿತಿ ಬಂದಿದೆ.
ಈ ನಡುವೆ ರಾಜಸ್ಥಾನ ಜೈಪುರದ ಆಸ್ಪತ್ರೆಯೊಂದರಿಂದ 320 ಡೋಸ್ ಕೊರೋನಾ ಲಸಿಕೆಗಳನ್ನು ಕಳ್ಳತನ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ನಿನ್ನೆ ಲಸಿಕೆಯ ಸ್ಟಾಕ್ ಲೆಕ್ಕ ಹಾಕುವ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.

ಜೈಪುರದ ಶಾಸ್ತ್ರಿ ನಗರ ಪ್ರದೇಶದ ಕನ್ವಾಟಿಯಾ ಆಸ್ಪತ್ರೆಯಲ್ಲಿ ನಡೆದ ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಲಸಿಕೆ ಕಳ್ಳರಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಕೊರೋನಾ ಲಸಿಕೆಯ ಕೊರತೆ ಎದುರಾಗಿದೆ ಎಂದು ರಾಜಸ್ಥಾನ ಆರೋಗ್ಯ ಸಚಿವ ರಘು ಶರ್ಮಾ ಹೇಳಿದ್ದಾರೆ. ಈ ನಡುವೆ 320 ಡೋಸ್ ಗಳು ನಾಪತ್ತೆಯಾಗಿದೆ ಅಂದರೆ ದುರಂತವೇ ಸರಿ.
Discussion about this post