ಬೆಂಗಳೂರು : ಕೊರೋನಾ ಲಸಿಕೆ ಪಡೆಯಲು ಜನ ಅಸ್ಪತ್ರೆಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಲಸಿಕೆ ಸಿಗುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಆದರೆ ಬೆಂಗಳೂರಿನ ವೈದ್ಯೆಯೊಬ್ಬಳು ಕಳ್ಳ ಮಾರ್ಗದಲ್ಲಿ ವ್ಯಾಕ್ಸಿನ್ ನೀಡುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಅನ್ನಪೂರ್ಣೇಶ್ವರಿ ನಗರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ವೈದ್ಯೆ ಡಾ.ಪುಷ್ಪಿತಾ ಮತ್ತು ಸಿಬ್ಬಂದಿ ಪ್ರೇಮಾ ಅವರನ್ನು ಬಂಧಿಸಲಾಗಿದೆ. ಡಾ. ಪುಷ್ಪಿತಾ ಮಂಜುನಾಥನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆಯಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಆಸ್ಪತ್ರೆಗೆ ಬರುತ್ತಿದ್ದ ಲಸಿಕೆಗಳನ್ನು ಪ್ರೇಮಾ ಮೂಲಕ ಅನ್ನಪೂರ್ಣೇಶ್ವರಿ ನಗರದಲ್ಲಿರುವ ತನ್ನ ಮನೆಯಲ್ಲಿ ದಾಸ್ತಾನು ಮಾಡಿಸುತ್ತಿದ್ದಳು. ಬಳಿಕ ಮನೆಯಲ್ಲಿಯೇ ಅಕ್ರಮವಾಗಿ ಲಸಿಕೆ ನೀಡುವ ದಂಧೆ ಕೂಡ ಆರಂಭಿಸಿದ್ದಳು

ಏ.23 ರಿಂದ ಈವರೆಗೆ 400ಕ್ಕೂ ಹೆಚ್ಚು ಮಂದಿಗೆ ಲಸಿಕೆ ಹಾಕಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು. ಪ್ರತಿಯೊಬ್ಬರಿಗೆ 500 ರೂಪಾಯಿ ಫೀಸು ಬೇರೆ ವಸೂಲಿ ಮಾಡಲಾಗುತ್ತಿತ್ತು. ಕೆಲವೊಂದು ಸಲ 80 ಜನರಿಗೆ ಲಸಿಕೆ ಕೊಟ್ಟ ದಿನಗಳೂ ಕೂಡಾ ಇದೆಯಂತೆ.
ಇನ್ನು ಈ ಪುಷ್ಪಿತಾ ಲಸಿಕೆ ಹಾಕುವ ಸಂದರ್ಭದಲ್ಲಿ ಯಡವಟ್ಟು ಮಾಡಿದ್ದು ಲಸಿಕೆ ಪಡೆದವರಿಗೆ ಹೊಸ ತಲೆ ನೋವು ಶುರುವಾಗಿದೆ. ನಿಯಮಗಳ ಪ್ರಕಾರ ಒಬ್ಬರಿಗೆ ಲಸಿಕೆ ಹಾಕಿದ ಬಳಿಕ ವಯಲ್ ಅನ್ನು ಮುಚ್ಚಿಡಬೇಕು. ಆದರೆ ಪುಷ್ಪಿತಾ ಬಾಟಲ್ ಮುಚ್ಚಳವನ್ನು ತೆರೆದಿಟ್ಟು ಸರತಿ ಸಾಲಿನಲ್ಲಿ ಬರುತ್ತಿದ್ದ ಜನರಿಗೆ ಲಸಿಕೆ ಹಾಕುತ್ತಿದ್ದಳು. ಈ ಕಾರಣದಿಂದ ಲಸಿಕೆ ಪಡೆದವರ ಮೇಲೆ ಲಸಿಕೆ ಹೆಚ್ಚು ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ.

ಮನೆಯಲ್ಲಿ ಅಕ್ರಮವಾಗಿ ಲಸಿಕೆ ಹಾಕುತ್ತಿರೋ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ತಾವು ಕೂಡ ಲಸಿಕೆ ಪಡೆಯುವ ನೆಪದಲ್ಲಿ ಮನೆಗೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ಅಕ್ರಮವಾಗಿ ಕೋವಿಶೀಲ್ಡ್ ಲಸಿಕೆ ಹಾಕುತ್ತಿರೋದನ್ನ ಖಚಿತ ಪಡಿಸಿಕೊಂಡ ಪೊಲೀಸರು ರೆಡ್ ಹ್ಯಾಂಡಾಗಿ ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರಿಂದ 1 ವ್ಯಾಕ್ಸಿನ್ ಕ್ಯಾರಿಯರ್, ಬಳಸಿದ ಹಾಗೂ ಬಳಸದ ಸಿರೀಂಜ್ ಗಳನ್ನು ವಶಕ್ಕೆ ಪಡೆಯಲಾಗಿದೆ.
Discussion about this post