ಮೈಸೂರು : ದೇಶದಲ್ಲಿ ಕೊರೋನಾ ಸೋಂಕಿನ ಎರಡನೆ ಅಲೆಯ ಅಬ್ಬರ ತೀವ್ರವಾಗಿದೆ. ಇನ್ನು ಮೂರನೇ ಅಲೆ ಮಕ್ಕಳನ್ನೇ ಟಾರ್ಗೇಟ್ ಮಾಡಿರುತ್ತದೆ ಅನ್ನುವ ಸುದ್ದಿಗಳು ಬರುತ್ತಿದೆ. ಹೀಗಾಗಿ ಸಹಜವಾಗಿಯೇ ಪೋಷಕರು ಆತಂಕಿತರಾಗಿದ್ದಾರೆ.
ಈ ನಡುವೆ ಭಾರತ್ ಬಯೋಟೆಕ್ ಸಂಶೋಧಿಸಿರುವ ಮಕ್ಕಳ ಕೊರೋನಾ ಲಸಿಕೆ ಹೊಸ ಭರವಸೆ ಮೂಡಿಸಿದೆ. ಈಗಾಗಲೇ ಹಿರಿಯ ಕೋವ್ಯಾಕ್ಸಿನ್ ಲಸಿಕೆ ಹಲವು ರೂಪಾಂತರಿ ವೈರಸ್ ಗಳನ್ನು ಸೋಲಿಸಿದೆ. ಜೊತೆಗೆ ಮೂಗಿನ ಮೂಲಕ ಕೊರೋನಾ ಸೋಂಕು ಕೊಲ್ಲುವ ಮೆಡಿಸಿನ್ ಸಂಶೋಧನೆಯನ್ನು ಭಾರತ್ ಬಯೋಟೆಕ್ ನಡೆಸುತ್ತಿದೆ.
ಹೀಗಾಗಿ ಮಕ್ಕಳಿಗಾಗಿ ಸಂಶೋಧಿಸಲಾಗಿರುವ ಕೋವ್ಯಾಕ್ಸಿನ್ ಲಸಿಕೆ ಗೇಮ್ ಚೆಂಜರ್ ಆಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಈಗಾಗಲೇ ಬೆಳಗಾವಿಯಲ್ಲಿ ಕೋವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳ ಮೇಲೆ ಪ್ರಯೋಗಿಸಲಾಗಿದ್ದು, ನಿರೀಕ್ಷೆಗೂ ಮೀರಿದ ಫಲಿತಾಂಶ ನೀಡಿದೆ. ಇದೀಗ ಮೈಸೂರಿನ ಚೆಲುವಾಂಬ ಮಕ್ಕಳ ಆಸ್ಪತ್ರೆಯಲ್ಲಿ ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗಿಸಲಾಗಿದ್ದು, ಪ್ರಯೋಗ ಯಶಸ್ವಿಯಾಗುವ ಮುನ್ಸೂಚನೆ ಸಿಕ್ಕಿದೆ ಎಂದು ಡಾ.ಪ್ರದೀಪ್ ಹೇಳಿದ್ದಾರೆ.
ಆಸ್ಪತ್ರೆಯಲ್ಲಿ 12 ರಿಂದ 18 ವರ್ಷ ಒಳಗಿನ 30 ಮಕ್ಕಳಿಗೆ ಲಸಿಕೆಯನ್ನು ಕಳೆದ ಭಾನುವಾರದಿಂದ ನೀಡಲಾಗಿದೆ. ಲಸಿಕೆ ಪಡೆದ ಮಕ್ಕಳನ್ನು 2 ಗಂಟೆಗಳ ಕಾಲ ಆಸ್ಪತ್ರೆಯಲ್ಲೇ ಉಳಿಸಿಕೊಳ್ಳಲಾಗಿತ್ತು. ಬಳಿಕ ಅವರನ್ನು ಮನೆಗೆ ಕಳುಹಿಸಿದ್ದು, ಈ ಪೈಕಿ 7 ಮಕ್ಕಳಿಗೆ ಇಂಜೆಕ್ಷನ್ ಚುಚ್ಚಿದ ಜಾಗದಲ್ಲಿ ನೋವಿತ್ತು. ಒಂದಿಬ್ಬರು ಮಕ್ಕಳಿಗೆ ಜ್ವರ ಬಂದಿದೆ. ಅದನ್ನು ಬಿಟ್ಟರೆ ಮತ್ಯಾವ ತೊಂದರೆಗಳು ಕಂಡು ಬಂದಿಲ್ಲ ಎಂದು ಡಾ. ಪ್ರದೀಪ್ ಹೇಳಿದ್ದಾರೆ.
ನಿತ್ಯ ಅಷ್ಟು ಮಕ್ಕಳ ಪೋಷಕರಿಗೆ ಕರೆ ಮಾಡಿ ಮಕ್ಕಳ ಆರೋಗ್ಯದ ಕುರಿತಂತೆ ಮಾಹಿತಿ ಪಡೆಯಲಾಗುತ್ತಿದೆ. ಮುಂದಿನ ಹಂತದಲ್ಲಿ 6 ರಿಂದ 12 ವರ್ಷದ ಮಕ್ಕಳಿಗೆ ಲಸಿಕೆ ಪ್ರಯೋಗ ನಡೆಯಲಿದೆ. ಅದಾದ ಬಳಿಕ 2 ರಿಂದ 6 ವರ್ಷ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆಯ ಪ್ರಯೋಗ ನಡೆಯಲಿದೆ.
ಒಟ್ಟು 6 ರಿಂದ 7 ತಿಂಗಳ ಕಾಲ ಲಸಿಕೆ ಪ್ರಯೋಗ ನಡೆಯಲಿದ್ದು, ಸಾಧಕ ಬಾಧಕಗಳನ್ನು ಗಮನಿಸಿದ ಬಳಿಕ ಲಸಿಕೆ ಬಿಡುಗಡೆಯಾಗಲಿದೆ.
ಈ ಹಿಂದೆ ಬೆಳಗಾವಿಯ ಜೀವನ್ ರೇಖಾ ಆಸ್ಪತ್ರೆಯಲ್ಲಿ 12 ರಿಂದ 18 ವರ್ಷದೊಳಗಿನ 20 ಮಕ್ಕಳ ಮೇಲೆ ಜೈಡಸ್ ಕ್ಯಾಡಿಲಾ ಕಂಪನಿ ಅಭಿವೃದ್ಧಿಪಡಿಸಿರುವ ಝೈಕೋವ್-ಡಿ ಕೊರೋನಾ ಲಸಿಕೆ ಪ್ರಯೋಗ ನಡೆದಿತ್ತು.
20 ಮಕ್ಕಳ ಮೇಲೆ ನಡೆಸಲಾದ ಪ್ರಯೋಗ ಯಶಸ್ವಿಯಾಗಿದ್ದು ಯಾವುದೇ ಮಕ್ಕಳು ಮೇಲೆ ಅಡ್ಡ ಪರಿಣಾಮಗಳಿಲ್ಲ ಎಂದು ಜೀವನ್ ರೇಖಾ ಆಸ್ಪತ್ರೆಯ ನಿರ್ದೇಶಕ ಡಾ.ಅಮಿತ್ ಭಾಟೆ ತಿಳಿಸಿದ್ದರು.
Discussion about this post