ಗೋಲ್ಡನ್ ಸ್ಟಾರ್’ ಗಣೇಶ್ ಅವರಿಗೆ ಜುಲೈ 2ರಂದು ಹುಟ್ಟುಹಬ್ಬದ ಸಂಭ್ರಮ. ಪ್ರತಿವರ್ಷ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಡಗರದಿಂದ ಆಚರಣೆ ಮಾಡುತ್ತಿದ್ದರು.
ಹಾರ, ಕೇಕ್ ತಂದು ಕುಣಿದು ಕುಪ್ಪಳಿಸುತ್ತಿದ್ದರು. ಆದರೆ ಕೊರೋನಾ ಕಾರಣದಿಂದ ಕಳೆದ ವರ್ಷ ಅದು ಸಾಧ್ಯವಾಗಿರಲಿಲ್ಲ. ಈ ವರ್ಷವೂ ಅಭಿಮಾನಿಗಳಿಗೆ ಕೊರೋನಾ ಕಾರಣದಿಂದ ನಿರಾಶೆಯ ಸುದ್ದಿಯೊಂದು ಬಂದಿದೆ.
ನಟ ಗಣೇಶ್ ಅವರು ಈ ವರ್ಷವೂ ಕೂಡ ಯಾವುದೇ ಆಚರಣೆ ಬೇಡ ಎಂದಿದ್ದಾರೆ. ‘ನೋವುಗಳ ನಡುವೆ ಸಂಭ್ರಮಕ್ಕೆ ಇದು ಸಮಯವಲ್ಲ’ ಎಂದು ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿರುವ ಅವರು “ ಎಲ್ಲರಿಗೂ ನಿಮ್ಮ ಗಣೇಶ್ ಮಾಡುವ ನಮಸ್ಕಾರಗಳು. ಮೊದಲಿಗೆ ನನಗೆ ಅರಿವಿದ್ದೂ, ಅರಿವಿಲ್ಲದೆಯೋ ಈ ಕೋವಿಡ್ ಸಮಯದಲ್ಲಿ ನನ್ನ ಹೆಸರಿನಲ್ಲಿ ಮಾಡಿರುವ ಕೆಲಸಗಳಿಗೆ ನಿಮಗೆ ಪ್ರಣಾಮಗಳು.. ಈ ಮೂಲಕ ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ಪ್ರತಿ ವರ್ಷವೂ ನನ್ನ ಜನ್ಮದಿನವನ್ನು ಹಬ್ಬದಂತೆ ಆಚರಿಸಿ ಆಶೀರ್ವದಿಸುತ್ತಾ ಬಂದಿರುವಿರಿ.
ಆದರೆ ಈ ವರ್ಷ ಕೊರೊನಾ ಮಹಾಮಾರಿಯ ಆರ್ಭಟಕ್ಕೆ ಸಿಕ್ಕು ನನ್ನ ಹಲವು ಸಿನಿಮಾ ಸಹೋದ್ಯೋಗಿಗಳು, ಆತ್ಮೀಯರು, ಗೆಳೆಯರು ಬಲಿಯಾದದ್ದು ನೋವು ತರಿಸಿದೆ. ಅದೆಷ್ಟೋ ಜನರ ಜೀವನಗಳು ನಲುಗಿ ಹೋಗಿವೆ. ಇಷ್ಟೆಲ್ಲ ನೋವುಗಳ ನಡುವೆ ಸಂಭ್ರಮಕ್ಕಿದು ಸರಿಹೊಂದುವ ಸಮಯವಲ್ಲ ಎಂದೆನಿಸಿ, ಈ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳದಿರಲು ಇಚ್ಚಿಸಿರುತ್ತೇನೆ. ಅಲ್ಲದೇ, ಜನ್ಮದಿನದಂದು ನಾನು ಹೊರಾಂಗಣ ಚಿತ್ರೀಕರಣದಲ್ಲಿ ತೊಡಗಿರುತ್ತೇನೆ.
ಪ್ರತಿ ವರ್ಷವೂ ಪ್ರೀತಿಯಿಂದ ಹುಟ್ಟುಹಬ್ಬ ಆಚರಣೆಗೆ ನೀವುಗಳು ಪ್ರೀತಿಯಿಂದ ತರುವ ಕೇಕ್, ಹಾರ, ಉಡುಗೊರೆ ಮುಂತಾದವುಗಳಿಗಾಗಿ ಈ ವರ್ಷ ಹಣ ವ್ಯಯಿಸದೇ, ಅದೇ ಖರ್ಚಿನ ಮೊತ್ತವನ್ನು ಕೊರೊನಾ ಸಂಕಷ್ಟದಲ್ಲಿರುವ ಮತ್ತಷ್ಟು ಜೀವಗಳಿಗೆ ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತೇನೆ… ಅದೇ ನನಗೆ ಶ್ರೀರಕ್ಷೆ’ ಎಂದು ಗಣೇಶ್ ಮನವಿ ಮಾಡಿಕೊಂಡಿದ್ದಾರೆ.
Discussion about this post