ಬೆಂಗಳೂರು : ರಾಜಕಾರಣಿಗಳು ಸೇರಿದಂತೆ ಸೆಲಬ್ರೆಟಿಗಳ ನೆಚ್ಚಿನ ತಾಣವಾಗಿರುವ ಈಗಲ್ ಟನ್ ಗಾಲ್ಫ್ ರೆಸಾರ್ಟ್ ನಿರ್ಮಾಣಕ್ಕೆ 77 ಎಕರೆ 19 ಗುಂಟೆ ಸರ್ಕಾರಿ ಜಮೀನು ಒತ್ತುವರಿ ಮಾಡಿರುವ ಸಂಬಂಧ ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈವೇಟ್ ಲಿಮಿಟೆಡ್ ಗೆ ಹಿನ್ನಡೆಯಾಗಿದೆ. ರಾಜ್ಯ ಸರ್ಕಾರ ವಿಧಿಸಿರುವ 982 ಕೋಟಿ ದಂಡ ಪಾವತಿಸುವಂತೆ ಕಂಪನಿಗೆ ಹೈಕೋರ್ಟ್ ಆದೇಶಿಸಿದ್ದು, ರಾಜ್ಯ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದೆ.
ಈ ಹಿಂದೆ ರಾಜ್ಯ ಸಚಿವ ಸಂಪುಟ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆ ದರ ನಿಗದಿಪಡಿಸಿದೆ ಎಂದು ಕಂಪನಿ ವಾದಿಸಿತ್ತು. ಜೊತೆಗೆ ಮಾರುಕಟ್ಟೆ ಮೌಲ್ಯ ಕೇವಲ 12.35 ಕೋಟಿ ಹೀಗಾಗಿ ಅದನ್ನು ಒಪ್ಪುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿ ಎಂದು ಕಂಪನಿ ಹೈಕೋರ್ಟ್ ಮೆಟ್ಟಿಲೇರಿತ್ತು.
ಆದರೆ ಈ ವಾದವನ್ನು ಒಪ್ಪದ ಹೈಕೋರ್ಟ್ ಖರೀದಿಸುವ ಹಾಗೂ ಮಾರಾಟ ಮಾಡುವ ವ್ಯಕ್ತಿ ಒಪ್ಪಿಕೊಳ್ಳುವ ದರವೇ ಮಾರುಕಟ್ಟೆ ದರವಾಗಿರುತ್ತದೆ. ಆದರೆ ಈ ಪ್ರಕರಣದಲ್ಲಿ ಸರ್ಕಾರ ನಿಗದಿ ಮಾಡಿರುವ ದರವನ್ನು ಕಂಪನಿ ಒಪ್ಪುತ್ತಿಲ್ಲ, ಕಂಪನಿ ನೀಡಲು ಇಚ್ಛಿಸಿರುವ ದರವನ್ನು ಸರ್ಕಾರ ಒಪ್ಪುತ್ತಿಲ್ಲ. ಜೊತೆಗೆ ಕಂಪನಿ ಕಳೆದ ಎರಡು ದಶಕಗಳಿಂದ ಭೂಮಿಯನ್ನು ಅನುಭವಿಸುತ್ತಿದೆ. ಇದಕ್ಕೆ ದಂಡ ಪಾವತಿಸಲೇಬೇಕಾಗುತ್ತದೆ. ಸರ್ಕಾರ ಭೂಮಿಯನ್ನು ಅಕ್ರಮವಾಗಿ ಬಳಸಿದ್ದು ಮತ್ತು ವಾಜ್ಯವನ್ನು ಮುಂದುವರಿಸಿಕೊಂಡು ಬಂದಿರುವುದು ಸರಿಯಲ್ಲ ಎಂದು ಕಂಪನಿಯ ಅರ್ಜಿಯನ್ನು ವಜಾಗೊಳಿಸಿದೆ.
Discussion about this post