ಹೊಸ ಚಿತ್ರಕ್ಕೆ ಬೆನ್ನು ತಟ್ಟಿದ ರಕ್ಷಿತ್ ಶೆಟ್ಟಿ, ಮಕ್ಕಳ ದಿನಾಚರಣೆಗೆ ಶ್ರೀಮನ್ನಾರಯಣನಿಂದ ಅಳಿದು ಉಳಿದವರು ಫಸ್ಟ್ ಲುಕ್ ರಿಲೀಸ್
ಚಂದನವನದ ಸಿಂಪಲ್ ಸ್ಟಾರ್ ರಕ್ಷಿತ್ ತಮ್ಮ ಮಹಾತ್ವಾಕಾಂಕ್ಷೆಯ ಶ್ರೀಮನ್ನಾರಾಯಣ ಚಿತ್ರದ ಟ್ರೈಲರ್ ಬಗ್ಗೆ ಮಾತನಾಡಿದ್ದರು. ರಕ್ಷಿತ್ ರನ್ನು ತೆರೆಯ ಮೇಲೆ ನೋಡಲು ಬಯಸುತ್ತಿರುವ ಅಭಿಮಾನಿಗಳ ಕುತೂಹಲ ತಣಿಸಿದ್ದರು.
ಅವನೇ ಶ್ರೀಮನ್ನಾರಾಯಣ ಚಿತ್ರದ ಪ್ರಚಾರ ಕಾರ್ಯದಲ್ಲಿ ನಿರತವಾಗಿರುವ ರಕ್ಷಿತ್ ಹೊಸ ಚಿತ್ರತಂಡಕ್ಕೆ ಬೆನ್ನು ತಟ್ಟಿದ್ದಾರೆ. ಹೊಸ ಚಿತ್ರವೊಂದರ ಫಸ್ಟ್ ಲುಕ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಹುರಿದುಂಬಿಸಿದ್ದಾರೆ.
ಗುರುವಾರ, ನ.14 ರಂದು ಹೊಸ ನಿರ್ದೇಶಕರ ಚಿತ್ರವಾದ ಅಳಿದು ಉಳಿದವರು ಫಸ್ಟ್ ಲುಕ್ ಅನಾವರಣಗೊಳಿಸಿದ್ದಾರೆ. ಮಕ್ಕಳ ದಿನಾಚರಣೆಯ ಹಿನ್ನಲೆಯಲ್ಲಿ ಹೊಸ ಚಿತ್ರ ಅಳಿದು ಉಳಿದವರು ಚಿತ್ರದ ಪೋಸ್ಟರ್ ಬಿಡುಗಡೆಯಾಗಿರುವುದು ವಿಶೇಷವಾಗಿದೆ. ಗುರುವಾರ ಸಂಜೆ 5.55ಕ್ಕೆ ಚಿತ್ರದ ಮೊದಲ ನೋಟ ಬಿಡುಗಡೆಯಾಗಿದೆ.
ಏನು ಹೇಳುತ್ತದೆ ಫಸ್ಟ್ ಲುಕ್…?
ಚಿತ್ರದ ಫಸ್ಟ್ ಲುಕ್ ನಲ್ಲಿ ಕೆಂಪು ಮತ್ತು ಕಪ್ಪು ಪಟ್ಟಿಗಳ ಆವರಣದ ನಡುವೆ ಮೂರು ಕಪ್ಪು ಆಕೃತಿಗಳು ನಿಂತಿರುವುದನ್ನು ನಾವು ಕಾಣಬಹುದು. ಭಿನ್ನ ಶೀರ್ಷಿಕೆಯ ಚಿತ್ರವು ತನ್ನ ಫಸ್ಟ್ ಲುಕ್ ನಲ್ಲಿ ಚಿತ್ರವು ವಿಶೇಷವಾದದ್ದನ್ನು ಹೇಳ ಹೊರಟಿದೆ ಎಂಬ ಸೂಚನೆ ನೀಡಿದ್ದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಚಿತ್ರದ ಟ್ರೈಲರ್ ಶೀಘ್ರದಲ್ಲೇ ಬರಲಿದೆ ಎಂದು ಚಿತ್ರತಂಡ ಪೋಸ್ಟರ್ ನಲ್ಲಿ ಹೇಳಿಕೊಂಡಿದೆ.

ಸ್ಟಾರ್ ನಟ, ನಿರ್ದೇಶಕರಾದ ರಕ್ಷಿತ್ ತಮ್ಮ ಸಮಯವನ್ನು ಮೀಸಲಿಟ್ಟು ಆಗಮಿಸಿರುವುದು ಚಿತ್ರತಂಡದ ಸಂತಸ ಇಮ್ಮಡಿಯಾಗುವಂತೆ ಮಾಡಿದೆ.
ಈ ಹಿಂದೆ ಕಹಿ ಸಿನಿಮಾ ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ಅರವಿಂದ್ ಶಾಸ್ತ್ರಿ ಈ ಹೊಸ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಶು ಬೆದ್ರ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅಶು ಬೆದ್ರ ವೆನ್ಚರ್ಸ್ ಮತ್ತು ಪಿವಿಆರ್ ಪಿಕ್ಚರ್ಸ್ ಸಂಸ್ಥೆಗಳು ಚಿತ್ರದ ನಿರ್ಮಾಣದ ಹೊಣೆಯನ್ನು ವಹಿಸಿಕೊಂಡಿವೆ.
ಬೆದ್ರ ನಿರ್ಮಾಪಕರಾಗುವ ಜೊತೆಗೆ ಮೊದಲ ಬಾರಿಗೆ ಅಳಿದು ಉಳಿದವರು ಚಿತ್ರದ ನಾಯಕನಾಗಿಯೂ ನಟಿಸುತ್ತಿದ್ದಾರೆ. ಸಂಗೀತ ಭಟ್ ಬೆದ್ರ ಅವರಿಗೆ ಜೋಡಿಯಾಗಲಿದ್ದಾರೆ. ಬೆದ್ರ ಅವರು ಈ ಹಿಂದೆ ಸಿಂಪಲ್ಲಾಗಿ ಇನ್ನೊಂದು ಲವ್ ಸ್ಟೋರಿ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದರು.
ಚಿತ್ರದಲ್ಲಿ ಪ್ರತಿಭಾವಂತ ನಟರಿದ್ದಾರೆ. ಹಿರಿಯ ನಟ ಅತುಲ್ ಕುಲಕರ್ಣಿ, ಲೂಸಿಯಾ ಪವನ್ ಕುಮಾರ್, ಬಿ ಸುರೇಶ್ ತಾರಾಗಣದಲ್ಲಿದ್ದು ಚಿತ್ರದ ಬಗ್ಗೆ ಕುತೂಹಲ ಹೆಚ್ಚುವಂತೆ ಮಾಡಿದೆ. ಮಿಥುನ್ ಮುಕುಂದ್ ಚಿತ್ರಕ್ಕೆ ರಾಗ ಸಂಯೋಜಿಸಿದ್ದಾರೆ.
ರಕ್ಷಿತ್ ಶೆಟ್ಟಿಯ ಅವನೇ ಶ್ರೀಮನ್ನಾರಾಯಣ ಚಿತ್ರದ ಬಗ್ಗೆ ಅಭಿಮಾನಿಗಳ ನಿರೀಕ್ಷೆ ದಿನ ದಿನಕ್ಕೂ ಹೆಚ್ಚುತ್ತಿದ್ದು ಇದರ ನಡುವೆ ಹೊಸ ಚಿತ್ರಗಳಿಗೆ ರಕ್ಷಿತ್ ಪ್ರೋತ್ಸಾಹ ನೀಡುತ್ತಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.
ಪ್ರಯೋಗಾತ್ಮಕ ನಿರ್ದೇಶಕನಾಗಿರುವ ರಕ್ಷಿತ್ ಮತ್ತೊಂದು ಪ್ರಯೋಗಾತ್ಮಕ ಚಿತ್ರಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಮೆಚ್ಚುವಂತಹದ್ದು.

Discussion about this post