ಬೆಂಗಳೂರು: ಮಹಾನಗರಪಾಲಿಕೆಯ ಮಾಜಿ ಸದಸ್ಯೆಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಕೊಲೆಯಾದವರನ್ನು ಛಲವಾದಿಪಾಳ್ಯದ ಬಿಜೆಪಿಯ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಎಂದು ಗುರುತಿಸಲಾಗಿದೆ. ಇವರ ಪತಿ ಕದಿರೇಶ್ ಅವರನ್ನು ಮೂರು ವರ್ಷಗಳ ಹಿಂದೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.
ಕಚೇರಿ ಒಳಗಿದ್ದ ರೇಖಾ ಕದಿರೇಶ್ ಅವರನ್ನು ಹೊರಗೆ ಕರೆದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ತೀವ್ರ ಹಲ್ಲೆ ನಡೆಸಿದ್ದಾರೆ. ರಕ್ತಸ್ರಾವವಾಗಿ ಕೆಳಗೆ ಬಿದ್ದ ಅವರನ್ನು ಸ್ಥಳೀಯರು ತಕ್ಷಣ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.

ರೇಖಾ ಕದಿರೇಶ್ ಅವರು ಕೆಲಸ ಮಾಡುತ್ತಿರುವ ಕಚೇರಿಯ ಹೊರಗೆ ಹಾಡಹಗಲೇ ಈ ಘಟನೆ ನಡೆದಿದ್ದು ಆಘಾತ ಮೂಡಿಸಿದೆ. ಚಿಕ್ಕಪೇಟೆ, ಕಾಟನ್ ಪೇಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಹಳೆ ವೈಷಮ್ಯದಿಂದ ರೇಖಾ ಅವರ ಹತ್ಯೆ ನಡೆದಿದೆ ಎಂದು ಸಂಶಯ ವ್ಯಕ್ತಪಡಿಸಲಾಗಿದ್ದು ಮೂರು ವರ್ಷಗಳ ಹಿಂದೆ ಅಂದ್ರೆ 2018ರ ಫೆಬ್ರವರಿ 7ರಂದು ರೇಖಾ ಅವರ ಪತಿ ಕದಿರೇಶ್ ಅವರನ್ನು ಸಹ ಇದೇ ರೀತಿ ದುಷ್ಕರ್ಮಿಗಳು ಕೊಚ್ಚಿ ಕೊಲೆಗೈದಿದ್ದರು. ಕದಿರೇಶ್ ಕೊಲೆ ಪ್ರಕರಣವನ್ನು ಶೋಭನ್ ಗ್ಯಾಂಗ್ ಮಾಡಿತ್ತು. ಬಳಿಕ ಸಹೋದರರಾದ ನವೀನ್ ಮತ್ತು ವಿನಯ್ ತಲೆ ಬೋಳಿಸಿಕೊಂಡು ವಕೀಲರ ವೇಷದಲ್ಲಿ ನ್ಯಾಯಾಧೀಶರ ಮುಂದೆ ಹಾಜರಾಗಿ ತಾವೇ ಕೊಲೆ ಮಾಡಿರುವುದಾಗಿ ಹೇಳಿಕೆ ಕೊಟ್ಟಿದ್ದರು.

ಟೆಂಡರ್ ಕರೆದ ವಿಚಾರದಲ್ಲಿ ವೈಮನಸ್ಯ ಉಂಟಾಗಿ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
Discussion about this post