ಬೆಳ್ತಂಗಡಿ : ಬಳಂಜ Balanja ಗ್ರಾಮ ಪಂಚಾಯತ್ ನ ಕಂಬಳದಡ್ಡ ಎಂಬಲ್ಲಿ ಒಂದೇ ಕುಟುಂಬದ 13 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಈ ಮನೆಯಲ್ಲಿ ಒಟ್ಟು 18 ಸದಸ್ಯರಿದ್ದು, ಈ ಪೈಕಿ ಮನೆಯ ಹಿರಿಯರು, ಮಹಿಳೆಯರು, ಗರ್ಭಿಣಿಯರು ಹಾಗೂ ಒಂದೂವರೆ ಮತ್ತು ಎರಡು ವರ್ಷ 10 ತಿಂಗಳ ಮಗುವಿಗೆ ಸೋಂಕು ತಗುಲಿದೆ.
ಎಲ್ಲರೂ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಮುಂಜಾಗ್ರತ ಕ್ರಮವಾಗಿ ನೆರೆ ಹೊರೆಯ ಎಲ್ಲರಿಗೂ ಕೊರೋನಾ ಪರೀಕ್ಷೆ ನಡೆಸಲಾಗಿದೆ. ಅದೃಷ್ಟ ಅನ್ನುವಂತೆ ಎಲ್ಲರೂ ನೆಗೆಟಿವ್ ವರದಿ ಪಡೆದಿದ್ದಾರೆ. ಹಾಗಿದ್ದರೂ ಮುಂಜಾಗ್ರತ ಕ್ರಮವಾಗಿ ಎಲ್ಲರನ್ನೂ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಲಾಗಿದೆ.
ಈ ಹಿಂದೆ ಬಳಂಜ, ನಾಲ್ಕೂರು, ತೆಂಕಕಾರಂದೂರು ಗ್ರಾಮಗಳಲ್ಲಿ ಕೊರೋನಾ ಸೋಂಕಿನ ಅಬ್ಬರ ತೀವ್ರವಾಗಿದ್ದು, ಇದೀಗ ಎಲ್ಲರೂ ಗುಣಮುಖರಾಗಿದ್ದಾರೆ. ಇನ್ನು ಬಳಂಜ ಹಾಗೂ ತೆಂಕಕಾರಂದೂರು ಗ್ರಾಮದಲ್ಲಿ 18 ಸಕ್ರಿಯ ಪ್ರಕರಣಗಳಿದ್ದು, ಎಲ್ಲರೂ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಕೊರೋನಾ ಸೋಂಕಿತರಿರುವ ಮನೆಗಳಿಗೆ ವೈದ್ಯರ ತಂಡ ನಿಗದಿತವಾಗಿ ಭೇಟಿ ನೀಡುತ್ತಿದೆ. ಜೊತೆಗೆ ಗ್ರಾಮ ಪಂಚಾಯತ್ ಪಿಡಿಓ ಹಾಗೂ ಸದಸ್ಯರು ಕೂಡಾ ಭೇಟಿ ಕೊಟ್ಟಿದ್ದು ಸೋಂಕಿತರಿಗೆ ಧೈರ್ಯ ತುಂಬಿದ್ದಾರೆ. ಜೊತೆಗೆ ಸೋಂಕಿತರಿಗೆ ಮೆಡಿಸಿನ್ ಹಾಗೂ ಅಗತ್ಯ ವಸ್ತುಗಳನ್ನು ಕೂಡಾ ಪೂರೈಸಲಾಗಿದೆ.
Discussion about this post