ಬೆಂಗಳೂರು : ಮಾದಕ ವಸ್ತು ಮಾರಾಟ ತಡೆಯುವ ನಿಟ್ಟಿನಲ್ಲಿ ಇನ್ನಿಲ್ಲದ ಸರ್ಕಸ್ ನಡೆಯುತ್ತಿದೆ. ಆದರೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುವ ಸ್ಮಗ್ಲರ್ ಗಳು ಇನ್ನಿಲ್ಲದ ಐಡಿಯಾ ಮಾಡುತ್ತಾರೆ. ಶೂ ಸಾಕ್ಸ್, ಟೋಪನ್ ಎಂದು ಮಾದಕ ವಸ್ತು ತರೋದು ಹಳೆ ಐಡಿಯಾ. ಈಗ ಹೊಸ ಹೊಸ ಐಡಿಯಾಗಳನ್ನು ದಂಧೆಕೋರರು ಹುಡುಕಿಕೊಂಡಿದ್ದಾರೆ. ಇಡಬಾರದ ಜಾಗದಲ್ಲಿ ಡ್ರಗ್ಸ್ ಇಟ್ಟು ಬರುತ್ತಿದ್ದಾರೆ.
ಆದರೆ ಆರ್ಥಿಕ ಗುಪ್ತಚರ ಇಲಾಖೆ ಅಧಿಕಾರಿಗಳು ಶನಿವಾರ ಬೇಧಿಸಿದ ಪ್ರಕರಣ ಸಿಕ್ಕಾಪಟ್ಟೆ ಡಿಫರೆಂಟ್, ಹೊಟ್ಟೆಯಲ್ಲೇ ಮಾದಕ ದ್ರವ್ಯದ ಗುಳಿಗೆ ಹೊತ್ತು ಬಂದಿದ್ದ ಈತ ತನ್ನ ಕಕ್ಕದಿಂದಲೇ ಆ ಮಾತ್ರೆಗಳನ್ನು ಹೆಕ್ಕಬೇಕಾಗಿತ್ತು.
ಆಗಸ್ಟ್ 19ರಂದು ದಕ್ಷಿಣ ಆಫ್ರಿಕದ ಜೋಹಾನ್ಸ್ಬರ್ಗ್ ವಿಮಾನ ನಿಲ್ದಾಣದಲ್ಲಿ ವಿಮಾನ ಏರಿದ್ದ ಈತ ನೇರವಾಗಿ ದುಬೈಗೆ ಬಂದಿದ್ದ. ಅಲ್ಲಿಂದ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಆರ್ಥಿಕ ಗುಪ್ತಚರ ಇಲಾಖೆ (ಡಿಆರ್ಐ) ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ನೈಜೀರಿಯಾ ಪ್ರಜೆಯೊಬ್ಬ ಮಾದಕ ವಸ್ತು ತರುತ್ತಿದ್ದಾನೆ ಅನ್ನುವ ಮಾಹಿತಿಯ ಬೆನ್ನು ಹತ್ತಿ ಸಂಶಯಾಸ್ಪದ ವ್ಯಕ್ತಿಯನ್ನು ವಶಕ್ಕೆ ಪಡೆದು ಶೋಧ ನಡೆಸಿದ್ದಾರೆ. ಆದರೆ ಮಾದಕ ದ್ರವ್ಯ ವಸ್ತು ಪತ್ತೆಯಾಗಿಲ. ಎಲ್ಲೋ ಯಾಮಾರಿದ್ದೇವೆ ಎಂದು ಅಂದುಕೊಂಡ ಅಧಿಕಾರಿಗಳು ವಶಕ್ಕೆ ಪಡೆದ ವ್ಯಕ್ತಿಯ ಹೊಟ್ಟೆ ಸ್ಕ್ಯಾನ್ ಮಾಡಿದ್ದಾರೆ. ಆಗ ಹೊಟ್ಟೆಯಲ್ಲಿ ಅನುಮಾನಾಸ್ಪದ ಗುಳಿಗೆ ಇರುವುದು ಗೊತ್ತಾಗಿದೆ. ಬಳಿಕ ಪೆಡ್ಲರ್ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮಾತ್ರೆಗಳನ್ನು ಹೊರ ತೆಗೆಯಲಾಗಿದೆ.
ನಂತರ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದರೆ, ನೈಜೀರಿಯಾ ಮೂಲದ ಪ್ರಜೆ, ಉಚಿತ ಆಹಾರ, ನೀರು, ತಂಪು ಪಾನಿಯ ಏನೂ ಸೇವಿಸಿಲ್ಲ. ಸೇವಿಸಿದ ಬಳಿಕ ಟಾಯ್ಲೆಟ್ ಗೆ ಹೋದರೆ ಹೊಟ್ಟೆಯೊಳಗಿನ ಮಾತ್ರೆಗಳು ಎಲಿ ಹೋಗಿ ಬಿಡುತ್ತದೋ ಅನ್ನುವ ಆತಂಕ ಅವನದ್ದು.
ಈ ವೇಳೆ ಡ್ರಗ್ಸ್ ದಂಧೆಯ ಬಗ್ಗೆ ನನಗೇನು ಗೊತ್ತಿಲ್ಲ ಅಂದಿರುವ ಆರೋಪಿ, ದಕ್ಷಿಣ ಆಫ್ರಿಕದಲ್ಲಿ ಅಪರಿಚಿತ ವ್ಯಕ್ತಿ ನನಗೆ ಡ್ರಗ್ಸ್ ಗುಳಿಗೆ ನುಂಗಿಸಿದ್ದಾನೆ. ಜೊತೆಗೆ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿದ್ದು, ಅಲ್ಲಿ ಉಳಿದುಕೊಳ್ಳುವಂತೆ ಸೂಚಿಸಲಾಗಿತ್ತು. ಆ ರೂಮ್ಗೆ ವ್ಯಕ್ತಿಯೊಬ್ಬ ಬಂದು ಮೊಬೈಲ್ ಕೊಡ್ತಾನೆ, ಬಳಿಕ ಆ ಮೊಬೈಲ್ ಗೆ ಬರೋ ಕರೆಯ ಸೂಚನೆ ಪಾಲನೆ ಮಾಡಿದರೆ ಹೊಟ್ಟೆಯಲ್ಲಿ ಇರುವ ಗುಳಿಗೆ ಹೊರ ಬರುತ್ತದೆ, ನಂತರ ಅದು ಎಲ್ಲಿಗೆ ಯಾರಿಗೆ ಸೇರಬೇಕೋ ಸೇರುತ್ತದೆ. ನಂತರ ನನಗೆ ಹಣ ಕೊಡುವುದಾಗಿ ಆ ವ್ಯಕ್ತಿ ಭರವಸೆ ನೀಡಿದ್ದ ಅಂದಿದ್ದಾನೆ.
ಇನ್ನು ಡ್ರಗ್ಸ್ ಗುಳಿಗೆ ಒಪನ್ ಮಾಡಿದರೆ ಒಟ್ಟು 11 ಕೋಟಿ ರೂ. ಮೌಲ್ಯದ 1.25 ಕೆಜಿ ಕೊಕೇನ್ ಸಿಕ್ಕಿದೆ. ಅಂದ ಹಾಗೇ ಬಂಧಿತನಾಗಿರುವ 30 ವರ್ಷ ವ್ಯಕ್ತಿ ಕಿಡ್ನಿ ಚಿಕಿತ್ಸೆ ಸಲುವಾಗಿ ಹೆಲ್ತ್ ವೀಸಾ ಪಡೆದುಕೊಂಡು ಬೆಂಗಳೂರಿಗೆ ಬಂದಿದ್ದ. ಹಾಗಾದ್ರೆ ಆ ಆಸ್ಪತ್ರೆಗೂ ಈ ದಂಧೆಗೂ ಏನಾದರೂ ಸಂಬಂಧವಿದೆಯೇ ಅನ್ನುವುದು ಅನುಮಾನ.
Discussion about this post