ಗರ್ಭಪಾತಕ್ಕೆ ಅನುಮತಿ ನೀಡುವ ಮಿತಿಯನ್ನು ಪ್ರಸ್ತುತ 20 ವಾರಗಳಿಂದ 24 ವಾರಗಳವರೆಗೆ ಹೆಚ್ಚಿಸುವ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಪ್ರಸ್ತುತ ಭಾರತದಲ್ಲಿ 20 ವಾರದೊಳಗಿನ ಗರ್ಭವನ್ನು ಮಾತ್ರ ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶವಿದೆ. ಇದೀಗ ಇದನ್ನು 24 ವಾರಗಳಿಗೆ ಅಂದರೆ ಸುಮಾರು 6 ತಿಂಗಳಿಗೆ ಹೆಚ್ಚಳ ಮಾಡಲು ಮೋದಿ ಸರ್ಕಾರ ನಿರ್ಧರಿಸಿದೆ.
ಈ ಸಲುವಾಗಿ ಗರ್ಭಧಾರಣೆಯ ವೈದ್ಯಕೀಯ ಸಮಾಪ್ತಿ ಕಾಯ್ದೆ (1971)ಗೆ ತಿದ್ದುಪಡಿ ತರಲು ಹಾಗೂ ಗರ್ಭಧಾರಣೆಯ ವೈದ್ಯಕೀಯ ಸಮಾಪ್ತಿ (ತಿದ್ದುಪಡಿ) ಮಸೂದೆ 2020ಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಮುಂಬರುವ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗಲಿದೆ.
ಇನ್ನು ಸಂಪುಟದ ನಿರ್ಧಾರದ ಬಳಿಕ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, 24 ವಾರಗಳವರೆಗೆ ಮಹಿಳೆಗೆ ಗರ್ಭಪಾತಕ್ಕೆ ಅನುಮತಿ ನೀಡುತ್ತಿರುವುದರಿಂದ ಅತ್ಯಾಚಾರಕ್ಕೆ ಒಳಗಾದವರು, ವಿಕಲಾಂಗ ಬಾಲಕಿಯರು ಮತ್ತು ಅಪ್ರಾಪ್ತ ವಯಸ್ಕರಿಗೆ ಸಹಾಯವಾಗುತ್ತದೆ. ಇಂತಹವರಿಗೆ ಕೆಲವೊಮ್ಮೆ ತಾವು ಗರ್ಭಿಣಿಯಾಗಿದ್ದಾರೆಂದು ಎಷ್ಟೋ ತಿಂಗಳವರೆಗೆ ತಿಳಿದಿರುವುದಿಲ್ಲ ಅಂದಿದ್ದಾರೆ.
Discussion about this post