ತುಮಕೂರು: ಆಕಸ್ಮಿಕವಾಗಿ ಬಾವಿಗೆ ಬಿದ್ದು ತಾಯಿ ಮತ್ತು ಇಬ್ಬರು ಮಕ್ಕಳು ಸೇರಿ ಮೂವರು ಮೃತಪಟ್ಟಿರುವ ಘಟನೆ ಹುಣ್ಣಿಮೆಯ ದಿನದಂದು ತುಮಕೂರಿನ ಚಿಕ್ಕತೊಟ್ಲುಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿರುಮಲಪಾಳ್ಯದಲ್ಲಿ ನಡೆದಿದೆ.
ಮೃತರನ್ನು ತಿರುಮಲಪಾಳ್ಯದ ಕುಮಾರ್ ಅವರ ಪತ್ನಿ ಹೇಮಲತಾ (34) ಹಾಗೂ ಮಕ್ಕಳಾದ ಮಾನಸ (6), ಪೂರ್ವಿಕಾ (3) ಎಂದು ಗುರುತಿಸಲಾಗಿದೆ.
ಗುರುವಾರ ಹುಣ್ಣಿಮೆ ಪ್ರಯುಕ್ತ ತೋಟದಲ್ಲಿ ಮೊಸರನ್ನ ಎಡೆ ಹಾಕಲು ಹೋಗಿದ್ದ ವೇಳೆ ಮಾನಸ ಬಾವಿಯ ದಡದಲ್ಲಿದ್ದ ಸೀಬೆ ಹಣ್ಣಿನ ಮರದಲ್ಲಿ ಹಣ್ಣು ಕೀಳಲು ಹೋಗಿ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾಳೆ. ಜೊತೆಯಲ್ಲೇ ಇದ್ದ ಪೂರ್ವಿಕಾ ಸಹ ಅಕ್ಕನಂತೆ ಬಾವಿಗೆ ಬಿದ್ದಿದ್ದಾಳೆ. ತನ್ನ ಇಬ್ಬರು ಮಕ್ಕಳು ಬಾವಿಗೆ ಬಿದ್ದಿದ್ದನ್ನು ನೋಡಿದ ತಾಯಿ ಹೇಮಲತಾ ಅವರು ಮಕ್ಕಳನ್ನು ರಕ್ಷಿಸಲು ಬಾವಿಗೆ ಹಾರಿದ್ದಾರೆ.

ಬೆಳಗ್ಗೆ 7.30ಕ್ಕೆ ತೋಟಕ್ಕೆ ಹೋದವರು ಬೆಳಗ್ಗೆ 9 ಕಳೆದರೂ ಮನೆಗೆ ವಾಪಸ್ ಬಾರದ ಕಾರಣ ಪತಿ ಕುಮಾರ್ ತೋಟಕ್ಕೆ ಹೋಗಿ ನೋಡಿದಾಗ, ಅವರ ಜಮೀನಿನಲ್ಲಿರುವ ಬಾವಿಯಲ್ಲಿ ಮಗುವಿನ ಶವ ತೇಲುತ್ತಿತ್ತು. ಇದನ್ನು ಕಂಡ ಕುಮಾರ್ ಭಯದಿಂದ ಕೂಗಾಡಿದ್ದಾರೆ, ಇದನ್ನು ಗಮನಿಸಿದ ಅಕ್ಕ ಪಕ್ಕದ ಜಮೀನು ಮಾಲೀಕರು ಬಂದು ನೋಡಿದಾಗ ಮಗುವಿನ ಶವ ಮಾತ್ರ ಬಾವಿಯಲ್ಲಿ ತೇಲುತ್ತಿತ್ತು. ನಂತರ ಕೋರಾ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬಾವಿಯಲ್ಲಿ ಪರಿಶೀಲಿಸಿದಾಗ ಹೇಮಲತ ಹಾಗೂ ಮತ್ತೊಂದು ಮಗುವಿನ ಶವ ಪತ್ತೆಯಾಗಿದೆ. 3 ಶವಗಳನ್ನು ಬಾವಿಯಿಂದ ಹೊರ ತೆಗೆದು ಶವಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಂಬಂಧ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ನಡುವೆ ಇದೊಂದು ಆತ್ಮಹತ್ಯೆ ಅನ್ನುವ ಮಾತುಗಳು ಕೇಳಿ ಬರುತ್ತಿದೆ. ಈ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
Discussion about this post