ಬೆಂಗಳೂರು : ನಟ ದರ್ಶನ್ ಹೆಸರಿನಲ್ಲಿ ವಂಚನೆಗೆ ಯತ್ನಿಸಿದ ಆರೋಪದಲ್ಲಿ ನಕಲಿ ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಂಚನೆ ಪ್ರಕರಣ ಸಂಬಂಧ ಮೈಸೂರಿನಲ್ಲಿ ಎಫ್ ಐ ಆರ್ ಕೂಡಾ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರನ್ನೂ ಕೂಡಾ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಈ ಪ್ರಕರಣ ತನಿಖೆಯನ್ನು ಡಿಸಿಪಿ ಪ್ರದೀಪ್ ಗುಂಠಿಯವರಿಗೆ ವಹಿಸಲಾಗಿದ್ದು, ಕೆಲವೇ ದಿನಗಳಲ್ಲಿ ಪ್ರಕರಣದ ವಿವರಗಳು ಹೊರ ಬರುವ ಸಾಧ್ಯತೆಗಳಿದೆ.ವಂಚನೆ ಪ್ರಕರಣದ ವಿವರಗಳು ಇನ್ನೂ ಗೊಂದಲದಿಂದ ಕೂಡಿದ್ದು, ಸ್ಪಷ್ಟ ಚಿತ್ರಣ ಕೊಡಲು ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಅವರಿಗೆ ಸಾಧ್ಯವಾಗಿಲ್ಲ. ಹೀಗಾಗಿ ಪೊಲೀಸರೇ ಪ್ರಕರಣವನ್ನು ವಿವರಿಸುವ ತನಕ ಸ್ಪಷ್ಟ ಚಿತ್ರಣ ದೊರೆಯುವ ಸಾಧ್ಯತೆಗಳಿಲ್ಲ.
ಈಗ ಲಭ್ಯ ಮಾಹಿತಿ ಪ್ರಕಾರ ನಕಲಿ ಬ್ಯಾಂಕ್ ಸಿಬ್ಬಂದಿ ಅರುಣಾ ಅನ್ನುವವರು ದರ್ಶನ್ ಬಳಿಗೆ ತೆರಳಿ, ನಾನು ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡು ನಿಮ್ಮ ಹೆಸರಿನಲ್ಲಿ ನಿಮ್ಮ ಸ್ನೇಹಿತರು 25 ಕೋಟಿಗೆ ಅರ್ಜಿ ಹಾಕಿದ್ದಾರೆ ಎಂದು ಹೇಳಿದ್ದರು. ನಿಮ್ಮ ಸ್ನೇಹಿತರಿಂದ ನಿಮ್ಮ ಶ್ಯೂರಿಟಿಯಲ್ಲಿ ಸಾಲಕ್ಕೆ ಅರ್ಜಿ ಹಾಕಲಾಗಿದೆ ಎಂದು ಅರುಣಾ ಹೇಳಿದ್ದರು.ಇದಾದ ಬಳಿಕ ಪರಿಶೀಲನೆ ನಡೆಸಿದಾಗ ಲೋನ್ ಗೆ ಯಾರೊಬ್ಬರೂ ಅರ್ಜಿ ಸಲ್ಲಿಸಿಲ್ಲ ಅನ್ನುವುದು ಗೊತ್ತಾಗಿದೆ. ಹೀಗಾಗಿ ದರ್ಶನ್ ಸ್ನೇಹಿತರು ಮೈಸೂರಿನ ಹೆಬ್ಬಾಳ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದರ್ಶನ್ ಸ್ನೇಹಿತರ ದೂರಿನ ಆಧಾರದಲ್ಲಿ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ನಡುವೆ ಆರೋಪಿ ಅರುಣಾಕುಮಾರಿ ದರ್ಶನ್ ಹೆಸರಿನಲ್ಲಿ ಕೋಟಿ ಕೋಟಿ ವಂಚನೆ ಮಾಡುವುದಕ್ಕೆ ಮುಂದಾಗಿದ್ದರು ಅನ್ನುವುದು ದರ್ಶನ್ ವಲಯದಿಂದ ಸಿಕ್ಕಿರುವ ಮಾಹಿತಿ. ಆದರೆ ವಂಚನೆ ಜಾಲ ಹೇಗೆ ಹೆಣೆಯಲಾಗಿತ್ತು ಅನ್ನುವುದೇ ಯಕ್ಷ ಪ್ರಶ್ನೆ. ಭೇಟಿ ಮಾಡಿ ಮಾಹಿತಿ ಕೇಳಿದ್ದಾರೆ ಅಂದ್ರೆ ಮಹಿಳೆಯ ಹಿಂದೆ ಬೇರೆ ಯಾರೋ ಇರಬೇಕಲ್ವ. ಮಹಿಳೆಯೊಬ್ಬರೇ ಹೋಗಿ ದರ್ಶನ್ ರಂತಹ ನಟನನ್ನು ಮೋಸ ಮಾಡಲು ಸಾಧ್ಯವೇ..?
Discussion about this post