ಬಹಳಷ್ಟು ವರ್ಷಗಳ ಬಳಿಕ ಚಂದನವನದಲ್ಲಿ ಮನುಷ್ಯ ಹಾಗು ಸಾಕು ಪ್ರಾಣಿ ಸಂಬಂಧ ಅನಾವರಣಗೊಳಿಸುವ ಚಿತ್ರ ನಾನು ಮತ್ತು ಗುಂಡ ತೆರೆಗೆ ಬರಲು ಸಿದ್ಧವಾಗಿದೆ.
ಸಂಪೂರ್ಣ ಸಿನಿಮಾ, ಫಸ್ಟ್ ಲುಕ್, ಟೀಸರ್ ಗಳಿಂದ ವಿಶೇಷವಾಗಿ ಸದ್ದು ಮಾಡುತ್ತಿರುವ ಚಿತ್ರ ಇದಾಗಿದೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್. ಪೇಟೆ, ಸಂಯುಕ್ತ ಹೊರನಾಡು ಹಾಗು ಸಿಂಬಾ ಅನ್ನುವ ಶ್ವಾನ ಅಭಿನಯದ ಚಿತ್ರ ಇದಾಗಿದೆ. ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದಲ್ಲಿ ಪೊಯಂ ಪಿಕ್ಚರ್ಸ್ ಬ್ಯಾನರ್ಸ್ ನಡಿ ಗಾಂಧಿಗಿರಿ ಚಿತ್ರದ ನಿರ್ದೇಶಕ ರಘು ಹಾಸನ್ ಅವರು ನಿರ್ಮಿಸಿರುವ ಚಿತ್ರ ಇದಾಗಿದೆ. ಚಿತ್ರಕ್ಕೆ ಶರತ್ ಚಕ್ರವರ್ತಿ ಸಂಭಾಷಣೆ ಬರೆದಿದ್ದರೆ, ಕಾರ್ತಿಕ್ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ.

ಚಿತ್ರದಲ್ಲಿ ಶ್ವಾನವನ್ನೇ ಮುಖ್ಯ ಪಾತ್ರದಾರಿಯನ್ನಾಗಿಸಿಕೊಂಡು ತೆರೆಗೆ ಬರಲು ಹೊರಟಿಸುವ ಈ ಚಿತ್ರ, ಕನ್ನಡ ಚಿತ್ರರಂಗದಲ್ಲಿ ವಿಶೇಷ ನಿರೀಕ್ಷೆಯನ್ನಿಟ್ಟುಕೊಂಡಿದ್ದು, ತೆರೆಗೆ ಬರಲು ಸಿದ್ಧವಾಗಿದೆ.
ಇತ್ತೀಚೆಗಷ್ಟೇ ಸೆನ್ಸಾರ್ ಪರೀಕ್ಷೆಯಲ್ಲಿ ಪಾಸ್ ಆಗಿರುವ ನಾನು ಮತ್ತು ಗುಂಡ ಚಿತ್ರವನ್ನು ನೋಡಿ ಮೆಚ್ಚಿಕೊಂಡಿರುವ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು ಸರ್ಟೀಫಿಕೆಟ್ ನೀಡಿದೆ.
ಎಲ್ಲಾ ವರ್ಗದ ಜನರು ನೋಡುವಂತಹ ಮನುಷ್ಯ ಹಾಗು ಪ್ರಾಣಿಗಳ ನಡುವಿನ ಭಾವನಾತ್ಮಕ ಸಂಬಂಧ ಬೆಸೆಯುವ ಅದ್ಬುತ ಚಿತ್ರವೆಂದು ಅದು ಬಣ್ಣಿಸಿದೆ. ಅಪರೂಪದ ಪ್ರಯೋಗಗಳನ್ನು ಬೆಂಬಲಿಸುವ ಅಂತಹ ಚಿತ್ರಗಳನ್ನು ವಿತರಿಸಿ ಯಶಸ್ಸು ಕಂಡಿರುವ ಮೈಸೂರು ಟಾಕೀಸ್ ನ ಜಾಕ್ ಮಂಜು ಅವರು ನಾನು ಮತ್ತು ಗುಂಡ ಚಿತ್ರವನ್ನು ನೋಡಿ ಮೆಚ್ಚಿ ವಿತರಣೆಗೆ ಮುಂದಾಗಿದ್ದಾರೆ.

ಈ ಹಿಂದೆ ಯು ಟರ್ನ್, ಒಂದು ಮೊಟ್ಟೆಯ ಕಥೆ, ಗಂಟು ಮೂಟೆ ಸೇರಿದಂತೆ, ಹಲವು ವಿಶಿಷ್ಠ ಬಗೆ ಸಿನಿಮಾಗಳನ್ನ ವಿತರಿಸಿ, ಯಶಸ್ಸು ಕಂಡಿರುವ ಜಾಕ್ ಮಂಜು, ಈ ವರ್ಷದ ಆರಂಭದಲ್ಲೇ ನಾನು ಮತ್ತು ಗುಂಡ ಚಿತ್ರವನ್ನು ವಿತರಣೆಗೆ ತೆಗೆದುಕೊಂಡು, ಈ ಚಿತ್ರದ ಮೇಲೆ ತುಂಬಾ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ನಾನು ಮತ್ತು ಗುಂಡ ಚಿತ್ರತಂಡ ಈ ಮೂಲಕ ಭರ್ಜರಿ ಪ್ರಚಾರವನ್ನು ಆರಂಭಿಸಿದ್ದು, ಸದ್ಯದಲ್ಲೇ ಚಿತ್ರದ ಕುರಿತಂತೆ ಮತ್ತಷ್ಟು ವಿಶೇಷ ವಿಚಾರಗಳನ್ನು ಹಿಂಚಿಕೊಳ್ಳುವ ಧಾವಂತದಲ್ಲಿದೆ. ಇದೀಗ ನಾನು ಮತ್ತು ಗುಂಡ ಚಿತ್ರದ ಟ್ರೈಲರ್ ಬಿಡುಗಡೆಗೆ ದಿನಾಂಕ ಪ್ರಕಟಿಸುವ ಸನ್ನಾಹದಲ್ಲಿದೆ.
Discussion about this post