ನವದೆಹಲಿ : ಹಲವು ತಿಂಗಳ ಹಿಂದೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಮಿಡತೆ ದಾಳಿಯಿಂದ ಕಂಗಲಾಗಿತ್ತು. ಕೃಷಿ ಭೂಮಿಗೆ ಹಿಂಡು ಹಿಂಡಾಗಿ ದಾಳಿ ಇಟ್ಟ ಮಿಡತೆಗಳು ತಿಂದು ಹಾಕಿದ ಬೆಳೆಯ ಪ್ರಮಾಣಕ್ಕೆ ಲೆಕ್ಕವಿಲ್ಲ.
ಇದೀಗ ಆಸ್ಟ್ರೇಲಿಯಾದ ಕೃಷಿ ಭೂಮಿಯ ಮೇಲೆ ಇಲಿ ದಾಳಿ ಪ್ರಾರಂಭವಾಗಿದ್ದು, ಸಾವಿರಾರು ಸಂಖ್ಯೆ ಬಂದಿರುವ ಇಲಿಗಳು 5000 ಕೋಟಿ ರೂಪಾಯಿ ಮೌಲ್ಯದ ಬೆಳೆಯನ್ನು ನಾಶ ಮಾಡಿದೆ. ಅದರಲ್ಲೂ ಅಸ್ಟ್ರೇಲಿಯಾ ಮೂರು ರಾಜ್ಯಗಳಲ್ಲಿ ಇಲಿಯ ಸಮಸ್ಯೆಯಿಂದ ನಾಗರಿಕರು ಕಂಗಲಾಗಿದ್ದಾರೆ. ರಾತ್ರಿ ಹೊತ್ತಿನಲ್ಲಿ ಕೃಷಿ ಭೂಮಿ ಮಾತ್ರವಲ್ಲದೆ ಜನವಸತಿ ಪ್ರದೇಶಗಳ ಮೇಲೆ ದಾಳಿ ನಡೆಸುತ್ತಿರುವ ಇಲಿ ಸೈನ್ಯ ಮನೆಯ ವಸ್ತುಗಳನ್ನು ನಾಶ ಮಾಡುತ್ತಿದೆ. ಜನ ಮಲಗಲೂ ಭಯಪಡುವಂತಾಗಿದೆ.
ಈಗಾಗಲೇ ಹಲವು ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಗೋಧಿ, ಬಾರ್ಲಿ, ಕ್ಯಾನೋಲಾ ಬೆಳೆಗಳನ್ನು ಇಲಿ ಸೇನೆ ತಿಂದು ಮುಗಿಸಿದೆ. ಇನ್ನು ಇಲಿಗಳು ಬಿಲ ಕೊರೆದು ಮನೆ, ಆಸ್ಪತ್ರೆ, ಕಚೇರಿ, ಶಾಲೆಗಳನ್ನು ಸೇರುತ್ತಿದೆ. ಇದರಿಂದ ಎಲೆಕ್ಟ್ರಿಕಲ್ ವೈಯರ್ ಗಳು ತುಂಡಾಗಿ ಅಗ್ನಿ ಅವಘಡಗಳು ಸಂಭವಿಸಲಾರಂಭಿಸಿದೆ.
ಆದರೆ ಅಸ್ಟ್ರೇಲಿಯಾಕ್ಕೆ ಇಲಿ ದಾಳಿ ಹೊಸದೇನಲ್ಲ. ಪ್ರತೀ 5 ಅಥವಾ 10 ವರ್ಷಗಳಿಗೊಮ್ಮೆ ದೇಶದ ಪೂರ್ವ ರಾಜ್ಯಗಳಲ್ಲಿ ಸಣ್ಣ ಮಟ್ಟಿನಲ್ಲಿ ಇಲಿಗಳ ದಾಳಿ ನಡೆಯುತ್ತಿರುತ್ತದೆ. ಅದನ್ನು ನಿಭಾಯಿಸುವ ಕೆಲಸವೂ ಅಷ್ಟೇ ವೇಗವಾಗಿ ನಡೆಯುತ್ತಿತ್ತು. ಆದರೆ ಈ ಬಾರಿ ಲಕ್ಷಾಂತರ ಸಂಖ್ಯೆಯಲ್ಲಿ ಇಲಿಗಳು ಬಂದಿರುವುದು ತಲೆ ನೋವಾಗಿ ಪರಿಣಮಿಸಿದೆ.
ಹೀಗಾಗಿ ಇದೀಗಿ ಇಲಿಗಳ ನಿಯಂತ್ರಣ ಸಲುವಾಗಿ ಭಾರತದ ಸಹಾಯ ಯಾಚಿಸಿರುವ ಅಸ್ಟ್ರೇಲಿಯಾ ‘ಬ್ರೋಮಾಡಿಯೋಲೋನ್’ ಅನ್ನೋ ಕಠಿಣ ವಿಷ ಪದಾರ್ಥವನ್ನು ಕಳುಹಿಸಿಕೊಡುವಂತೆ ಕೋರಿಕೆ ಸಲ್ಲಿಸಿದೆ. ಒಂದು ವೇಳೆ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ರೆ ಪ್ಲೇಗ್ ಭಯ ಕಾಡಲಾರಂಭಿಸಿದೆ.
Discussion about this post