ಜೋಗಿ, 16 ವರ್ಷಗಳ ಹಿಂದೆ ಸದ್ದು ಮಾಡಿದ್ದ ಸಿನಿಮಾ. ಈ ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಈ ಚಿತ್ರದ ಪ್ರತಿಯೊಂದು ದೃಶ್ಯವೂ ನೆನಪಿರುತ್ತದೆ. ಹಾಡುಗಳು ಇನ್ನೂ ಕಿವಿಯಲ್ಲಿರುತ್ತದೆ. ಅಂತಹುದೊಂದು ಸಿನಿಮಾ ಕೊಟ್ಟ ಹಿರಿಮೆ ಪ್ರೇಮ್ ಅವರದ್ದು. ಇದೇ ಕಾರಣಕ್ಕಾಗಿ ಪ್ರೇಮ್, ಜೋಗಿ ಪ್ರೇಮ್ ಆಗಿ ಚಂದನವನದಲ್ಲಿ ಹೆಸರು ಪಡೆದರು.ಇನ್ನು ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಹಾಗೂ ಆರುಂಧತಿ ನಾಗ್ ಅವರ ನಟನೆಯನ್ನೂ ಮರೆಯುವ ಹಾಗಿಲ್ಲ.

ಅಂದ ಹಾಗೇ ಈ ಸಿನಿಮಾದ ಕಥೆ ಹುಟ್ಟಿರುವುದರ ಹಿಂದೆ ಇಂಟ್ರರೆಸ್ಟಿಂಗ್ ಕಥೆಯಿದೆ. ಅದು ಎಕ್ಸ್ಕ್ಯೂಸ್ಮಿ ಚಿತ್ರದಲ್ಲಿ ಪ್ರೇಮ್ ತೊಡಗಿಸಿಕೊಂಡಿದ್ದ ದಿನಗಳು. ಆಗ ಶಿವರಾಜ್ಕುಮಾರ್ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡೋಣ ಅನ್ನುವ ಆಫರ್ ಅನ್ನು ಪ್ರೇಮ್ ಗೆ ಕೊಟ್ಟಿದ್ದಾರೆ. ಅಶ್ವಿನಿ ಆಡಿಯೋದವರಿಗೆ ಡೇಟ್ಸ್ ಕೊಡಿ, ಅವರ ಬ್ಯಾನರ್ನಲ್ಲೇ ನಾವಿಬ್ಬರೂ ಸಿನಿಮಾ ಮಾಡೋಣ ಎಂದು ಪ್ರೇಮ್ ಹೇಳಿದ್ದಾರೆ. ಈ ಮಾತುಕತೆ ನಡೆದದ್ದು ಶಿವರಾಜ್ ಕುಮಾರ್ ಅವರ ಸದಾಶಿವ ನಗರದ ಮನೆಯಲ್ಲಿ.

ಹಾಗೇ ಸದಾಶಿವನಗರದಿಂದ ಹೊರಟ ಪ್ರೇಮ್ ವಿಜಯನಗರಕ್ಕೆ ಬರುವಷ್ಟರಲ್ಲಿ ಒನ್ಲೈನ್ ಕಥೆ ರೆಡಿ ಮಾಡಿಕೊಂಡಿದ್ದರು. ಇದು ಪ್ರೇಮ್ ಜೀವನದಲ್ಲಿ ನಡೆದ ಘಟನೆಯನ್ನೇ ಆಧರಿಸಿದ ಕಥೆಯಾಗಿದ್ದು, ಅರುಂಧತಿ ನಾಗ್ ಅವರ ಪಾತ್ರ ಪ್ರೇಮ್ ತಾಯಿ ಭಾಗ್ಯಮ್ಮ ಅವರದ್ದು. ತಂದೆ ಸತ್ತು ಹೋದಾಗ ಬಳೆ ಒಡೆಯಬೇಡಿ ಎಂದು ಪ್ರೇಮ್ ಒತ್ತಾಯಿಸಿದ್ದರಂತೆ. ಜೊತೆಗೆ ತಾಯಿಗೆ ಚಿನ್ನದ ಬಳೆ ಕೊಡಿಸುವ ಆಸೆಯೂ ಅವರಿಗಿತ್ತಂತೆ. ಅದೇ ಎಳೆಯನ್ನಿಟ್ಟುಕೊಂಡ ಪ್ರೇಮ್ ಜೋಗಿ ಕಥೆಯನ್ನು ಹೆಣೆದಿದ್ದರು.
Discussion about this post