ನವದೆಹಲಿ : ಮಾರಕ ಕೊರೋನಾ ವೈರಸ್ ವಿರುದ್ಧದ ಭಾರತದ ಹೋರಾಟಕ್ಕೆ ಇದೀಗ ಬಲ ಬಂದಿದೆ. ಕೊರೋನಾ ಸೋಂಕಿತರನ್ನು ಉಳಿಸುವ ನಿಟ್ಟಿನ ಚಿಕಿತ್ಸೆಗೆ ಹೊಸ ಔಷಧ ಸೇರಿಕೊಂಡಿದೆ.
ಕೊರೋನಾ ಸೋಂಕಿತರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೊಸ ಔಷಧ ಬಳಸಲು ಭಾರತೀಯ ಔಷಧ ನಿಯಂತ್ರಕ ಮಹಾಮಂಡಳಿ ಒಪ್ಪಿಗೆ ನೀಡಿದೆ. ಹೀಗಾಗಿ ಇನ್ಮುಂದೆ ಝೈಡಸ್ ಕ್ಯಾಡಿಲಾ ಸಂಸ್ಥೆಯ ವಿರಾಫಿನ್ ಔಷಧವನ್ನು ಕೊರೊನಾ ಸೋಂಕಿತರ ಚಿಕಿತ್ಸೆಗೆ ಭಾರತದ ವೈದ್ಯರು ಬಳಸಬಹುದಾಗಿದೆ.
ವಿರಾಫಿನ್ ಔಷಧಿ ನೀಡಿದಾಗ ಕೃತಕ ಆಮ್ಲಜನಕವನ್ನು ನೀಡಬೇಕಾದ ಅಗತ್ಯವೂ ಹೆಚ್ಚಿನ ಸಂದರ್ಭಗಳಲ್ಲಿ ಬರೋದಿಲ್ಲ. ಕೊರೊನಾ ಸೋಂಕಿನಿಂದ ಉಂಟಾಗುವ ಉಸಿರಾಟದ ಸಮಸ್ಯೆಗಳನ್ನು ವಿರಾಫಿನ್ ಔಷಧಿ ಪರಿಣಾಮಕಾರಿಯಾಗಿ ತಡೆಯುತ್ತದೆ, ಕೊರೊನಾದಿಂದ ಸೋಂಕಿತರು ಚೇತರಿಸಿಕೊಂಡ ಬಳಿಕ ಕಾಣಿಸುವ ಇತರ ಆರೋಗ್ಯದ ಸಮಸ್ಯೆಗಳನ್ನೂ ಇದು ತಡೆಯತ್ತದೆ. ವಿರಾಫಿನ್ ಚಿಕಿತ್ಸೆಯ ಬಳಿಕ ಕೊರೊನಾ ಸೋಂಕು ದೃಢಪಟ್ಟಿದ್ದ ಶೇ 91.15ರಷ್ಟು ರೋಗಿಗಳಲ್ಲಿ ಆರ್ಟಿ-ಪಿಸಿಆರ್ ಪರೀಕ್ಷೆ ವೇಳೆ 7 ದಿನಗಳಲ್ಲಿ ನೆಗೆಟಿವ್ ವರದಿ ಬಂದಿತ್ತು ಎಂದು ಕಂಪನಿ ಹೇಳಿಕೊಂಡಿದೆ.
ಚರ್ಮದ ಒಳಪದರಕ್ಕೆ ಕೊಡುವ ವಿರಾಫಿನ್ನ ಸಿಂಗಲ್ ಡೋಸ್ ವೈರಾಣು ಸೋಂಕು ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಕೊರೊನಾ ಸೋಂಕು ಪ್ರಕರಣಗಳಲ್ಲೂ ಇದು ಪರಿಣಾಮಕಾರಿ ಅನ್ನುವುದು ಕಂಪನಿಯ ವಾದ.
Discussion about this post